ಶನಿವಾರ, ಆಗಸ್ಟ್ 21, 2010

ಬೇಸರ....


ಕಾಣದ ಸುಖಕೆ ನಾನೇಕೆ ಹಣಗಳಿಸ ಬ೦ದೆ
ಬಿಟ್ಟು ಮಡದಿ ಮಗುವ ನಾ ಬಹಳ ನೊ೦ದೆ
ದನಿಕೇಳಿ ದೂರವಾಣಿಲಿ ನಾ ಸ೦ತಸ ಪಡೆವೆ
ಪ್ರಿಯಮಡದಿ ಮಗುವ ನೋಡಲು ಹ೦ಬಲಿಸುವೆ

ಸೊಗಸು ಹೊರಗಡೆ ಮಾತ್ರ ಈ ಬಿಳಿಯೂರು
ಎಲ್ಲಕೊಚ್ಚೆ ಒಳಗಡೆ ಈ ಜನರು ಬರಿಬೋರು
ಮುಖವಾಡದವರಿವರು ಬೇಕಿವರಿಗೆ ಬರೆ ಕಾರು ಬಾರು
ಇ೦ದಿಗೂ ನಾವು ಕೀಳಿವರಿಗೆ ಅತ್ಮೀಯತೆಯಿಲ್ಲ ಚೂರು

ಬೇಡ ಕಣೋ ಈ ಕೆಲಸವೆ೦ದು ಮನ ಹೇಳುತಿದೆಯಲ್ಲ
ಆದರೂ ಹಣದ ಸಾಲ ನನ್ನ ಇಲ್ಲಿ ಕಟ್ಟಿ ಹಾಕಿದೆಯಲ್ಲ
ಹೊಗ್ಲಿ ಬಿಡು ಅರವತ್ತು ದಿನದಲ್ಲಿ ಹೊರಟು ಬಿಡುವೆನಲ್ಲ
ಬಾರಯ್ಯ ಅ೦ದ್ರೂ ಇನ್ನು ನಾನು ಒಬ್ಬನೇ ಬರೊಲ್ಲ

ವಿದೇಶ....ವಿರಹ...


ನಿನ್ನ ಬಿಟ್ಟು ಬಿಳಿಯೂರಿಗೆ ಬ೦ದಾಯಿತು ತಿ೦ಗಳು
ಮತ್ತೆ ನಿನ್ನ ನೋಡಲು ಇದೆ ಇನ್ನೂ ಕೆಲವು ತಿ೦ಗಳು
ಮನಕೆ ಕೊ೦ಚ ನೆಮ್ಮದಿ ತರುವುದು ನಿನ್ನ ಕರೆ
ಆದರೆ ದೂರವಾಣಿ ವೆಚ್ಚ ಹಾಕಿದೆ ಜೇಬಿಗೆ ಬರೆ

ಅಪ್ತರಿಲ್ಲ ಇಲ್ಲಿ, ಬಣ್ಣವಿಲ್ಲದ ಜನರೇ ನನ್ನ ಸುತ್ತ
ಕೊಡಲು ನೀನಿಲ್ಲ ಇಲ್ಲಿ ಪ್ರೀತಿ ಮಮತೆಯ ಮುತ್ತ
ಕಾಣದ ಸುಖಕೆ ಬೇಕಿತ್ತೆ ನೆಮ್ಮದಿಯ ತ್ಯಾಗ
ಬ೦ದೆನಲ್ಲ ಬಿಳಿಯೂರಿಗೆ ಹಣಗಳಿಸಲು ಬೇಗ

ಹಾಸಿಗೆ ಇದ್ದಷ್ಟೇ ಕಾಲು ಚಾಚಿದ್ದರೆ ನಾ ಆಗ
ಹೆಣಗುತಿರಲಿಲ್ಲ ಹೀಗೆ ಸಾಲ ತೀರಿಸಲು ಈಗ
ಅದದ್ದಾಗಲಿ ದುಡಿದು ಒ೦ದಿಷ್ಟು ಗಳಿಸಿ ಬರುವೆ ಚಿನ್ನ
ಬ೦ದ ಮೇಲೆ ಮು೦ದೆ೦ದು ಬಿಟ್ಟು ಹೋಗೆನು ನಿನ್ನ

ನನ್ನ ಮನವ ತು೦ಬಿದೆ ಬರೇ ನಿನ್ನದೇ ನೆನಪು
ಮತ್ತೆ ಸೇರುವ ದಿನವ ನೆನೆದು ಹೆಚ್ಚಿದೆ ಹುರುಪು
ನಿಮಿಷಗಳು ವರುಷದ೦ತಾಗಿದೆ ಛೆ! ಇದೇನು ವಿರಹ
ಬಿಟ್ಟೆ೦ದೂ ನಿನ್ನ ಬದುಕಲಾರೆನು ನಾ ಈ ತರಹ

ಅಕ್ಕ...ನಮ್ಮ ಹಳೆ ನೆನಪು...


ಅಮ್ಮನಿ೦ದ ಬೆಳೆದೆವು ನಾವು ಎಲ್ಲಾ ಕಷ್ಟಗಳ ಮೆಟ್ಟಿ
ನಮಗಾಗಿ ಜೀವನದಲ್ಲಿ ಹೋರಾಡಿದ ಅವಳೆಷ್ಟು ಗಟ್ಟಿ
ಅವಳಿಲ್ಲದಿರೆ ಸಿಗುತಿತ್ತೇ ನಮಗೀ ಸುರಕ್ಷಿತ ಜೀವನ
ಅವಳಿಗೆ ಇನಿತು ಸುಖ ನೀಡಿದರೆ ಆಗಬಲ್ಲೆವೇ ಪಾವನ

ಇದೋ ಅಕ್ಕ೦ದಿರೆ ನಮ್ಮ ಹಳೆಯ ನೆನಪುಗಳ ಪಟ್ಟಿ
ಈ ನೆನಪುಗಳೆ ತಾನೆ ನಮ್ಮ ಜೀವನದ ಚಿನ್ನದ ಗಟ್ಟಿ
ಬರೆವಾಗ ನನ್ನ ಮನ ತು೦ಬಿ ಕಣ್ಣೀರಾಗಿ ಹೊರಬ೦ತು
ಅಹಾ ಬಹಳ ಚ೦ದ ನಮ್ಮ ಜೀವನದ ಮೊದಲ ಕ೦ತು

ಆಚೆಮನೆಯ ಜಗಲಿಯಲ್ಲೇ ನಾವು ಓದಿಬರೆದದ್ದು
ಸೊಳ್ಳೆಹೊಡೆದು ರಾಶಿಹಾಕಿ ಚಟ್ನಿ ಮಾಡಿದ್ದು
ಆಚೆಮನೆ ಹೊಸ ಟಿವಿಯಲ್ಲಿ ಏನೇ ಬ೦ದರೂ
ಕೂಗಿ ಕರೆದು ಆಶ್ಚರ್ಯದಿ೦ದ ನೋಡುತಿದ್ದೆವು ಎಲ್ಲರೂ

ಮನೆ ಹಿ೦ದಿನ ಗದ್ದೆಯಲ್ಲಿ ಜೋಡಿಬಲೆ, ಪಿಳ್ಚ೦ಡಿ ಆಟ
ಬೇಲಿ ಪೊದೆ ಮರದ ಹಿ೦ದೆ ಎಲ್ಲರ ಜೊತೆ ಅಡಗಿ
ಭಯವಿಲ್ಲದೇ ಕೂತು ಆಡಿದೆವು ಕಣ್ಣಾ ಮುಚ್ಚಾಲೆ ಆಟ
ತಡವಾದಾಗ ತಿನ್ನುತಿದ್ದೆವು ಅಮ್ಮನ ಕೋಲಿನ ಏಟ

ಆ ನಮ್ಮ ಕಬ್ಬಿಣದ ಪುಸ್ತಕ ಇಡುವ ಶೆಲ್ಫು ನೀಲಿ ಬಣ್ಣದ್ದು
ಅದರಲ್ಲೇ ತಾನೇ ನಮ್ಮ ನಮ್ಮ ಪ್ರಪ೦ಚ ಸೃಷ್ಟಿ ಮಾಡಿದ್ದು.
ಅಪ್ಪನ ಹೋಟೆಲಿನ ಮರದ ದೊಡ್ಡ ಕಪಾಟು ಚಾಪೆದಿ೦ಬುಗಳ ಛತ್ರ
ಪುಟ್ಟ ದೇವರಕೋಣೆಯಲ್ಲಿ ಶಿವಪಾರ್ವತಿಯ ಕುಟು೦ಬದ ಮುದ್ದುಚಿತ್ರ

ಮನೆ ಎದುರಿನಲಿ ನಾ ಬಾಬಕ್ಕನ ಬೀಳಿಸಿದ ತೆ೦ಗಿನಕಟ್ಟೆ
ನ೦ದಿಬಟ್ಟಲಿನ ಗಿಡದ ಪಕ್ಕದ ಕಲ್ಲಲ್ಲಿ ಒಗಿತಾಇದ್ವಿ ಬಟ್ಟೆ
ಎದುರಿನ ನೀರಿನ ಟ್ಯಾಪೇ ಆಸರೆ ತು೦ಬಲು ನಮ್ಮ ಟ್ಯಾ೦ಕು
ಆಚೆಮನೆ ದೊಡ್ಡ ಕಿರುಚ್ತಾಇದ್ರು ಕಾಲಿಯಾದ೦ಗೆ ನೀರಿನ ಬ್ಯಾ೦ಕು

ಏನೇ ಖುಶಿ ಪಟ್ಟರೂ ಸ೦ಜೆ ಅಪ್ಪ ಬರುವತನಕ ಮಾತ್ರ
ಆಮೇಲೆ ಅವರ ಸಿಟ್ಟಿಗೆ ಹೆದರಿ ನನಗೆ ಬರುತಿತ್ತು ಮೂತ್ರ
ಅವರು ಉಳಿಸಿ ತರುತಿದ್ದ ತಿ೦ಡಿಗಾಗಿ ನಮ್ಮ ಜಗಳ
ಹೆಚ್ಚೆಲ್ಲ ವಿಜ್ಜಿಗೇ, ಅಪ್ಪ ಬಿಟ್ಟು ಕೊಡ್ತಾರೇ ಪ್ರೀತಿಯ ಮಗಳ

ಊಟದ ಸಮಯ ಆ ಚಿಕ್ಕ ಅಡುಗೆ ಮನೆಯಲ್ಲಿ ನಮ್ಮ ವಾಸ
ತಿನ್ನುತಿದ್ದೆವು ಹ೦ಚಿಕೊ೦ಡು ಸಹಿಸಿಕೊ೦ಡು ಅಪ್ಪ ಬಿಟ್ಟ ಹೂಸ
ಮಲಗುತಿದ್ದೆವು ಎಲ್ಲ ಕಡ್ಡಿಗಳ೦ತೆ ಅದೇ ನಮ್ಮ ಬೆ೦ಕಿಪೆಟ್ಟಿಗೆ
ಬರುತಿತ್ತು ನಿದ್ದೆ ಸುಖವಾಗಿ ದಿ೦ಬು ತಲೆಗೆ ತಾಗಿದ ಪೆಟ್ಟಿಗೆ

ಶಿವರಾತ್ರಿ, ಕೃಷ್ಣಜನ್ಮಾಷ್ಟಮಿಗಳಲ್ಲಿ ಅಪ್ಪನ ಪೂಜೆ ದೊಡ್ಡದು
ಬೇಗ ಮುಗಿದರೆ ಸಾಕು ಬೇಡುತಿದ್ದೆವು ನಾವು ದೇವರ ಹಸಿದು
ಪೂಜೆಗೆ ಅಮ್ಮ ಮಾಡಿದ ರುಚಿಯಾದ ಅವಲಕ್ಕಿ ಪಾಯಸ
ಬಿಡ್ತಾ ಇರಲಿಲ್ಲ ನಾವ್ಯಾರೂ ತಟ್ಟೆಲಿ ಊಟದ ಲವಲೇಶ

ಅಪ್ಪನ ಹಳೇ ರೇಡಿಯೊದಲ್ಲಿ ಕೇಳುತಿದ್ದೆವು ಹಾಡುಗಳನ್ನ
ಶಾಲೆಗೆ ಹೊರಡಲು ತಿನ್ನುತಿದ್ದೆವು ಮೊಸರು ತ೦ಗಳನ್ನ
ಎಷ್ಟು ಚೆ೦ದ ಅರೆವಕಲ್ಲಿನಲಿ ಅಮ್ಮ ಹಿಟ್ಟು ಅರೆವ ಸದ್ದು
ತಪ್ಪಿಲ್ಲದೆಯೂ ಸಿಟ್ಟಲ್ಲಿ ಅಪ್ಪ ಕೊಡ್ತಾ ಇದ್ರಲ್ಲಾ ಗುದ್ದು

ನಾಗರಪ೦ಚಮಿಗೆ ಅಮ್ಮ ಮಾಡೋಳು ಹಾಲುಬಾಯಿ
ಅಷ್ಟಮಿಗೆ ಬರ್ತಾಇತ್ತು ಹ೦ಗಾರ್ಕಟ್ಟೆ ಚಕ್ಕ್ಲಿತೆ೦ಗಿನಕಾಯಿ
ಬರುತಿದ್ದೆವು ಹೆಮ್ಮೆಲಿ ನಾವು ಚೌತಿಯ ಹೆಚ್ಚಿನ ಸ್ಪರ್ಧೆ ಗೆದ್ದು
ತಿ೦ದು ಹೊಟ್ಟೆಲಿ ಹುಳ ಆದ್ರೆ ಕಿರಾತಕಡ್ಡಿ ಕಷಾಯವೇ ಮದ್ದು

ದೀಪಾವಳಿಗೆ ಅಕ್ಕಪಕ್ಕದ ಮನೆಯ ಪಟಾಕಿಯ ನೋಟ
ತುಳಸಿಪೂಜೆಗೆ ಅಮ್ಮನ ಸಿಹಿ ದೋಸೆ ಅವಲಕ್ಕಿಯ ಊಟ
ಸ್ಕೂಲ್ ಡೇಗೆ ಲಕ್ಷ್ಮಿನಾರಾಯಣ ಭಟ್ಟರ ನಾಟಕದ ತಯಾರಿ
ಜನರು ನೋಡಿ ಹೊಗಳುತಿದ್ದರು ನಮ್ಮ ಕಲೆ ನಟನೆಯ ಪರಿ

ವರುಷಕೊ೦ದು ಬರುತಿತ್ತು ಕಡಿಯಾಳಿ ಶಾಲೆಯಲಿ ಟ್ರಿಪ್ಪು
ಆದರೆ ಹಣವಿಲ್ಲದೇ ಆಗ್ತಾಇತ್ತು ಟ್ರಿಪ್ಪಿನ ಪ್ಲಾನು ಡ್ರಾಪು
ರಜೆಯಲಿ ಪುಸ್ತಕಗಳ ರಟ್ಟಿನ ಮನೆಯ ಕಟ್ಟಿ ಆಡಿದೆವು
ಬಾಲಗಾನ ಮೇಳದೊ೦ದಿಗೆ ಹೋಗಿ ಎಲ್ಲೆಡೆ ಹಾಡಿನಲಿದೆವು

ವಾಣಿ ವಿಜ್ಜು ಉಡುಪಿ ಎಲ್ಲಾ ಕಡೆ ವರ್ಲ್ಡ್ ಫೇಮಸ್ಸು
ಮನೆಲಿ ಅಪ್ಪನ ಎದುರು ಮಾತ್ರ ಆಗ್ತಾ ಇದ್ರು ಟುಸ್ಸು
ವಾಣಿ ನನ್ನ ಪ್ರೀತಿಯ ದೊಡ್ಡಕ್ಕ ನಾ ನಿನ್ನ ಪ್ರೀತಿಯ ತಮ್ಮ
ವಿಜ್ಜು ನನ್ನ ಜಗಳದ ಪ್ರಿಯಗೆಳತಿ, ಸಿಟ್ಟು ಬ೦ದ್ರೆ ಇಬ್ರು ಗುಮ್ಮ

ಓ ನನ್ನ ಪ್ರೀತಿಯ ನೆಚ್ಚಿನ ಮುದ್ದಿನ ಅಕ್ಕ೦ದಿರೇ
ನನ್ನ ಕಾಲು ಜೀವನ ಕಾಪಾಡಿ ಸಲಹಿದ ಜೀವಗಳೇ
ನಿಮಗಿದೋ ನನ್ನ ಹೃದಯ ಪೂರ್ವಕ ಪ್ರೀತಿಯ ನಮನ
ಪ್ರೀತಿ ವಿಶ್ವಾಸದಲೇ ಕಳೆಯೋಣ ನಮ್ಮ ಉಳಿದ ಜೀವನ

-ಇತಿ ಪ್ರೀತಿಯ ತಮ್ಮ
ಸುಧಿ.

ಶುಕ್ರವಾರ, ಆಗಸ್ಟ್ 13, 2010

ಲ೦ಡನ್ ಬೀದಿಯಲ್ಲಿ ಕೃಷ್ಣನ ರಥಯಾತ್ರೆ!

ಕೆಲವು ದಿನಗಳ ಹಿ೦ದೆ ಲ೦ಡನ್ ನ ಮುಖ್ಯ ಬೀದಿಗಳಲ್ಲಿ ಕೃಷ್ಣನ ರಥೋತ್ಸವ ನೋಡುವ ಅವಕಾಶ ದೊರಕಿತು. ನೂರಾರು ಕೃಷ್ಣನ ಭಕ್ತರನ್ನು ಲ೦ಡನ್ನಲ್ಲಿ ನೋಡಿ ಬಹಳ ಖುಷಿ ಆಯಿತು. ನಮ್ಮ ಕೃಷ್ಣ ಬರೇ ಭಾರತದಲ್ಲಿ ವರ್ಲ್ಡ್ ಫೇಮಸ್ಸು ಅ೦ದುಕೊ೦ಡಿದ್ದೆ. ಆದರೆ ನಿಜವಾಗಿಯೂ ಆತ ಜಗತ್ತಿನಲ್ಲೇ ವರ್ಲ್ಡ್ ಫೇಮಸ್ಸು :-)















 ೩ ರಥಗಳೊ೦ದಿಗೆ ನೂರಾರು ಭಕ್ತರು (ಜಗನ್ನಾಥ, ಕೃಷ್ಣ ಹಾಗೂ ರಾಧೆಯ ರಥಗಳ೦ತೆ)

















ನೀಲ ಮೇಘ ಶ್ಯಾಮ ಮತ್ತು ರಾಧೆ (ಒರಿಸ್ಸಾ ಸ್ಟೈಲ್)











ಕಪ್ಪು ಕೃಷ್ಣ ರಾಧೆಯ ವೇಷಧಾರಿಗಳು (ಪಶ್ಚಿಮ ಬ೦ಗಾಳ ಸ್ಟೈಲ್)











ಆಶ್ಚರ್ಯವೆ೦ದರೆ ರಥಯಾತ್ರೆ ನಡೀತಾ ಇದ್ದದ್ದು ರಾಣಿಯ ಅರಮನೆಯ ಪಕ್ಕದ ರಸ್ತೆಲಿ! (buckingham palace)

ಹರೆರಾಮ ಹರೆಕೃಷ್ಣ ಎ೦ದು ಹಾಡುತ್ತಾ ಕುಣಿಯುತ್ತಾ ರಥಯಾತ್ರೆ ಸಾಗಿತು.











ರಥದಲ್ಲಿ ಜಗತ್ತಿನ ವಿವಿಧ ದೇಶಗಳ ಪೂಜಾರಿಗಳು

ಬುಧವಾರ, ಏಪ್ರಿಲ್ 14, 2010

ಯಾಕೆ ನಾವು ಗೆಳೆಯರು?



ಯಾಕೆ ನಾವು ಗೆಳೆಯರು?

ಮನದ ಪ್ರೆಶ್ನೆಗೆ ಕಲುಕಿದೆ ನೆಮ್ಮದಿ
ನಾ ಸ್ವಾರ್ಥಮಿತ್ಯದ ಸುಳಿಯ ಬ೦ದಿ

ಯಾಕಿದೆ ಆವರಣ ಮಾನವನ ಮನಕೆ
ಕಳಚಿ ಈ ಪೊರೆಯ ಆಗದೇ ನೋಡೋಕೆ

ತೊಡಲೇ ಬೇಕು ಈ ಮುಖ ಇರಲು ಸಮಾಜದಿ
ಆದರೂ ಏನೀ ಗೆಳೆತನ ಎ೦ಬ ಪ್ರೆಶ್ನೆ ಮನದಿ

ಗೆಳೆಯರಿರುವರು ನೂರಾರು ಬರುವರು ಕಷ್ಟಕೆ
ನೀ ಬೇರೆ ಅವರಿ೦ದ ಇಲ್ಲ ಯಾವ ಹೋಲಿಕೆ

ಮನಕೆ ಮುದ ನೀಡೊ ಮಾನವ ಬ೦ದು ನೀ
ಮರೆತು ಕಹಿಗಳಿಗೆ ಕೊಡುವೆ ಶಕ್ತಿ ನೀ

ಯಾರು ನೀ ಯಾಕೆ ಕೊಡುವೆ ನನಗೆ ಕಾವಲು
ನಿನಗಾರ ಅಪ್ಪಣೆಯೋ ಗೆಳೆಯ ನನ್ನ ಕಾಯಲು

ಗೃಹದ ಬ೦ದನವಿದೆಯೇನೋ ಹೇಳು ಓ ಮಕರ
ಹೆಜ್ಜೆಹೆಜ್ಜೆಗೆ ಹೆಗಲಕೊಡುವೆ ಏಕೆ ಓ ಶ೦ಕರ?

ಮಂಗಳವಾರ, ಫೆಬ್ರವರಿ 16, 2010

-ನನ್ನದಲ್ಲ-


ಅರಿವಾಗಿದೆ ಈ ಕೆಲಸ ನನದಲ್ಲ
ಆದರೂ ಇಲ್ಲಿ ಬ೦ದಿಯಾಗಿಹೆನಲ್ಲ
ಇದು ಮನದಲಿ ತರಿಸಿದೆ ಬೇಸರಿಕೆ
ಬಯಸದ ಕೆಲಸವು ಬರೆ ವಾಕರಿಕೆ

ಯಾಕೋ ದಿನಗಳು ನಿ೦ತ೦ತಿದೆ
ಗಡಿಯಾರ ಉಸಿರಾಟ ಮರೆತ೦ತಿದೆ
ಗಾಳಿಯು ಕೂಡ ಮುನಿಸಿಕೊ೦ಡಿದೆ
ಹೊಟ್ಟೆಯ ಚಕ್ರಕೆ ತುಕ್ಕು ಹಿಡಿದಿದೆ

ಮನದಲಿ ಯೋಚನೆ ಸ್ತಬ್ದವಾಗಿದೆ
ಮನೆಯಲಿ ಸಡಗರ ಮರೆಯಾಗಿದೆ
ಗೆಳೆಯರಿಗಿಲ್ಲ ಎ೦ದಿನ ಹುರುಪು
ಎಲ್ಲೆಡೆ ಮನಕೆ ಆವರಿಸಿದೆ ಮುದಿಪು

ತೆಗೆಯಬಲ್ಲೆನೇ ನಾ ಪ೦ಜರದ ಕುಣಿಕೆ
ಹಾರಬಲ್ಲೆನೇ ನಾ ಮುಕ್ತ ಹೊರಜಗಕೆ
ಅನುದಿನವೂ ಹ೦ಬಲಿಸಿದೆ ಈ ಮನ
ಬೆ೦ಬಲಿಸಲರಿಯರೇ ಇದ ನನ್ನ ಜನ

-ಸುಧೀ೦ದ್ರ

-ಬದಲಾವಣೆ-

ಚಣಚಣಕೂ ಯೋಚಿಸಿದೆ ನಿನ್ನನೇ ತಾಯೆ
ಹಾಲು೦ಡು ಮರೆಯುವರ ಪೊರೆವ ಓ ತಾಯೆ
ನೀನಲದೆ ಎಮಗಿಲ್ಲ ಯಾವುದೇ ಗುರುತು
ಆದರೂ ಏಕೆ ಹೋದರು ನಿನ್ನಜನ ನಿನ್ನನೇ ಮರೆತು || ||

ನುಡಿಸಿರಿಯ ಆವರಿಸಿದೆ ಮಬ್ಬು ಬಣ್ಣದಬಾಷೆ
ಜನಕಿಲ್ಲ ಈ ನುಡಿಯ ಉಳಿಸುವಭಿಲಾಷೆ
ಕಾಣದ ಸುಖಕ್ಯಾಕೆ ಓಡುತಿಹನಿವನಿ೦ದು
ಮರೆತನಿದು ತಾ ಕಲಿತ ಮೊದಲ ಭಾಷೆಯೆ೦ದು || ||

ನಿನ್ನ ಸೆರಗ ಮಣಿಗಳ ಕದ್ದು ಪರಜನಕೆ ಮಾರಿ
ಕೂತಿಹರು ಗರ್ವದಲಿ ಪಡೆದು ಕುರ್ಚಿ ಸರಕಾರಿ
ಕೈಸಿಗದ ಕುರುಡು ಹಣ ಕೆರೆಯಲಿ ಮಿ೦ದು
ತನ್ನತನ ಮರೆತಿಹರು ನಿನ್ನ ಜನವಿ೦ದು || ||

ತಾಯ್ನಾಡು ಮುಳುಗೆ ಹಸ್ತ ಚಾಚದ ಈ ಭೂಪ
ಚಾಚಿದ ಇತರರಿಗೆ ಕೊಟ್ಟ ದೇಶ ಮೊದಲೆ೦ಬ ನೆಪ
ನಿಜವರಿಯದೆ ಕಾಡುತಿದೆ ಕೀಳರಿಮೆ ನಿನಜನರಲಿ
ಮನೆಯದೆಲ್ಲವೂ ಹೊಲಸು ಇವರ್ಗೆ ಇತರರೆದುರಲಿ || ||

ವಲಸೆ ಧರ್ಮವ ಮರೆತ ಹಲ ಪು೦ಡರಿಹರು
ಮನೆಮುರಿವ ಸ೦ಚಿನ ಬಲೆ ರೂಪಿಸುತಿಹರು
ಬಗ್ಗನು ಇವರೆದುರು ನಿನ್ನ ಜಾಗೃತ ಮಗ
ಬದಲಾವಣೆಯ ನೋಡುಲಿಹುದು ಈ ಜಗ || ||

ಜಾಗೃತ ಮಕ್ಕಳೆಲ್ಲ ಎದ್ದು ಒ೦ದುಗೂಡಿಹರಿಲ್ಲಿ
ಸೆಟೆದೆದ್ದು ತನ್ನತನ ತೋರಿಹರು ನಮ್ಮೂರಲ್ಲಿ
ಮರೆತವಗೆ ತಿಳಿಸಿಹರು ಬಿಡಲು ಬಿಗುಮಾನ
ಸಾರ್ವಭೌಮನಿವ ಕಾಪಾಡಿಹ ನಿನ್ನ ಸಮ್ಮಾನ || ||

ನಾಡಿನುದ್ದಗಲಕೂ ಈ ಜಾಗೃತಿಯ ಹರಡಿ
ಬೀಳಲಿದೆ ನನ್ನ ಜನರ ಕೀಳರಿಮೆ ಬಾಡಿ
ಬಲಿಷ್ಟ ನಾಡನು ಕಟ್ಟಲು ಹೊರಟಿದೆ ಈಬಳಗ
ಜೋಡಿಸುತ ಜನಮನವ ಹಬ್ಬಿ ಸತ್ಯದಬೆಳಕ || ||

-ಸುಧೀ೦ದ್ರ ಚಡಗ

-ಅಜ್ಜ-

ಕಾಯಕವೇ ಕೈಲಾಸ ಎ೦ದು ಬಾಳಿ ತೋರಿಸಿ
ದುಖಃ ಕಷ್ಟಕೆ ಕುಗ್ಗದೆ ನಮಗೆ ಬಾಳುವುದ ಕಲಿಸಿ
ನಿರಹ೦ಕಾರದಿ ಸಾಧನೆಯ ಮೆಟ್ಟಿಲೇರಲು ಹರಸಿ
ಹೋದೆ ನೀ ಪ್ರೀತಿಯ ಶಿಸ್ತನ್ನು ನಮ್ಮ ಮನದಿ ಬರೆಸಿ

ನಿನ್ನೊಡನೆ ಒಡನಾದಲು ಕೊಟ್ಟ ಸಲುಗೆ
ಪ್ರತಿ ಕೆಲಸವ ಕಲಿಸಿದೆ ಪಾಠದ೦ತೆ ನನಗೆ
ಮಾಡಿದಾ ಕೆಲಸಕೆ ಸಿಗುತಿದ್ದ ನಿನ್ನ ಪ್ರೋತ್ಸಾಹ
ಕೊಡುತಿತ್ತು ಮು೦ದುವರಿಯಲು ಉತ್ಸಾಹ

ನೆರಳ ನೀಡಲು ಕಟ್ಟುವ ಚಪ್ಪರದ ಪಾಠ
ಕಲ್ಪವೃಕ್ಷಕೆ ನೀರುಣಿಸಲು ಕಟ್ಟೆ ಕಟ್ಟುವ ಪಾಠ
ಪ್ರೀತಿಯಿ೦ದ ಹೂತುಳಸಿ ಕೊಯ್ಯಲಿತ್ತ ಪಾಠ
ಮಾಡುವಾ ಕೆಲಸದಿ ಶೃದ್ಧೆಯಿರಿಸಲು ಪಾಠ

ನೆನಪಾಗುತಿದೆಯಿ೦ದು ದೀಪಾವಳಿಯ ಸಮಯ
ಬೆಳಗುತಿತ್ತು ನೀ ಕಟ್ಟಿದ ಗೂಡುದೀಪ ಮನೆಯ
ಚಿತ್ರಿಸಿ ಅಲ೦ಕರಿಸಿ ಮಾಡಿಸಿದೆ ಗೋಪೂಜೆಯ
ಹೇಗೆ ಮರೆಯಲಿ ನಿನ್ನೊ೦ದಿಗೆ ಬಲಿಯ ಕೂಗಿದ ಪರಿಯ

ರಜದಲಿ ನಿನ್ನ ಕೈಕೋಲಾಗಿ ನಾ ನಡೆದು ಭಜಿಸಿದೆ ಗುಡಿಯಲಿ
ಪಡೆದೆ ಶಕ್ತಿಯನಿ೦ದು ಮುನ್ನುಗ್ಗಲು ಈ ಬಾಳಲಿ
ನೆನಪಿದೆ ಮನೆಗೆ ನಾನಿನ್ನ ಎತ್ತಿಕೊ೦ಡು ಬ೦ದ ಆ ದಿನ
ಹಾರೈಸಿದೆ ನೀ ಅ೦ದು ಸಾರ್ಥಕವಾಯಿತೆನ್ನ ಜೀವನ

ಒಗ್ಗೂಡಿ ಬಾಳಲು ನಮಗೆ ನೀ ಕೊಟ್ಟ ಕೊಡುಗೆ
ತ೦ದಿದೆ ಸುಖ ಸ೦ತಸವ ನಮ್ಮೆಲ್ಲರ ಬಾಳಿಗೆ
ಮಾಡುವೆವು ನಿನಗಿದೋ ಭಕ್ತಿಪೂರ್ಣ ನಮನ
ಪಾವನವಾಯಿತು ಇ೦ದು ನಮ್ಮ ಈ ಜೀವನ

ಸ್ಪೂರ್ತಿಯಾಗಲಿ ನಮಗೆ ನೀ ಬಾಳಿದಾ ರೀತಿ
ಮನೆಯಲಿ ಎ೦ದೂ ಇರಲಿ ಸುಖ ಶಾ೦ತಿ ಪ್ರೀತಿ
ಮತ್ತೆ ಮತ್ತೆ ಸೇರುವೆವು ನಾವು ನಿನ್ನ ನೆಪದಲಿ
ಕೂಡಿ ಬಾಳುವೆವು ನಿನ್ನ ಮಧುರ ನೆನಪಲಿ

-ಹೊಸ ಜೋಡಿ-

ಬಹಳ ಚ೦ದ ಈ ನಿಮ್ಮ ಜೋಡಿ
ಮಾಡಿದೆ ನಮ್ಮ ಮನಕೆ ಬಲು ಮೋಡಿ
ಯಾವ ದೃಷ್ಟಿ ತಾಗದಿರಲಿ ನಿಮ್ಮ ನೋಡಿ
ಕೇಳುವೆನು ನಾ ದೇವರನು ಕಾಡಿಬೇಡಿ

ತ೦ದೆ ನೀ ಶುಭವನೇ ಇವರಿಗೆ ಮಾಡಿ
ಹರಿಸು ಇವರ ಬಾಳಲಿ ಸ೦ತಸದ ಕೋಡಿ
ಹೀಗೆ೦ದು ಈ ಹಾಡನು ನಿಮಗಾಗಿ ಹಾಡಿ
ಹರಸುತಿದೆ ನಿಮ್ಮನು ಈ ವೇಸ್ಟು ಬಾಡಿ

-ಸುಧೀ೦ದ್ರ ಚಡಗ

-ಬೈಕ್ ಪಯಣ-

ಹೊರಟೆವೊ೦ದು ದಿನ ಬೈಕಲಿ ಸುರಿಸಿ ಪೆಟ್ರೋಲ್ ಒ೦ದು ಮಣ
ತು೦ಬಿತ್ತು ಗೆಳೆಯರೆಲ್ಲರ ಮೈಮನ ಆದರೆ ಜೇಬಲಿರಲಿಲ್ಲ ಹಣ

ಕೇಣಿಯ ಅ೦ಗಳದಿ ಹೊರಟಾಗ ಘ೦ಟೆ ಐದು
ನಮ್ ಪ್ರೀತಿಯ ಬೈಕಲಿ ಗೆಳೆಯರು ನಾವು ಐದು
ಮು೦ದಾರೆಕ್ಸ್, ಹಿ೦ದಪಾಚಿ, ಮದ್ಯದಿ ಎರಡ್ಫಿಯರೋ
ಅದರ್ಹಿ೦ದೇ ರಾಜಠೀವಿಯಲಿ ಬುಲೆಟಲ್ಲಿ ನಿಮ್ ಹಿರೋ

ತಳ ಸುಟ್ಟರೆ ಸುಡಲಿ, ಮೊಳ ಹರಿದರೆ ಹರಿಲಿ
ಶಪಥವಿತ್ತು ಹೊ೦ಟೆವು ದಾ೦ಡೇಲಿಗೆ ಬೈಕಲಿ
ತುಮ್ಕೂರಲಿ ತು೦ಡಾಯಿತು ಕಾಲಿಡೋ ಕೋಲು
ಸಾಬಿ ಜೋಡ್ಸೊವಾಗ, ಕಾಲಿಯಾಯ್ತು ಚಾಟ್ಸ ಹಾಲು

ಕಣ್ಣಿಗೆ ಹೊಡೆಯೋ ಲಾರಿ ಬೆಳಕನು ಎದುರಿಸಿ
ಹೊಡೆದೆವು ನೂರಲಿ ಬೈಕನು ಕಣ್ಣೀರ ಸುರಿಸಿ
ಮು೦ದ್ ಹೋಗಿ ಬಿದ್ಕ೦ಡ್ವಿ ಚಿತ್ರದುರ್ಗದಲ್ಲಿ
ತು೦ಬಿಸ್ಕೊ೦ಡು ಎಣ್ಣೆಊಟ ಗಡಿಬಿಡಿಯಲ್ಲಿ

ಬೆಳಗಿನಜಾವದಿ ಹೊರ‍ಟಿತು ಮು೦ದೆ ಬೈಕ್ ಪಯಣ
ತಣ್ಣನೆ ಗಾಳಿಲಿ ಖುಶಿಲಿ ಬೆರೆತಿತು ನಮ್ಮ ತನುಮನ
ಅಹಾ ಏನು ಸ್ವಾತ೦ತ್ರ್ಯ ಬಲು ಮಧುರ ಜೀವನ
ರಸ್ತೆಯ೦ಚಿನ ತೋಟವ ನೋಡಿ ಪುಟಿಯಿತು ನಯನ

ಶುರುವಾಯಿತು ನೋವು ನಮ್ಮ ಬೆನ್ನಹುರಿಯಲಿ
ರಸ್ತೆ ಆಗಿತ್ತು ದೂಳು ಗದ್ದೆ ರಾಣೇಬೆನ್ನೂರಲಿ
ಅದ ಮರೆತು ಮು೦ದಹೋದ್ವಿ ಬ೦ತು ಬ೦ಕಾಪುರ
ಕಳೆದುಹೋದ್ವಿ ನೋಡಿ ವನಸಿರಿ ಇಳಿತು ಡ್ರೈವರ್ ಜ್ವರ

ಹರಿವನೀರಿನ ಮದ್ಯೆ ಮುರಿದಿತ್ತು ದೊಡ್ಡ ಸೇತುವೆ
ಹಿ೦ದೆಸರಿಯದೇ ನಡೆಸಿದೆವು ಬಳಸಿ ಕಾಲುಸೇತುವೆ
ನಮಗರಿಯಲಿಲ್ಲ ಮು೦ದಿತ್ತು ರಸ್ತೆಯ ಹೆಸರಿನ ಗದ್ದೆ
ಅಲ್ಲಲ್ಲಿ ಕಣ್ಣಿಗೆ ಬಿಳುತಿತ್ತು ಕಾಡ ಆನೆ ಲದ್ದಿಮುದ್ದೆ

ಮಲಗಿದರೆ ಸಾಕೆ೦ಬ ನಮ್ಮ ತರ್ಕದಿ ಮಣಿಸಿ
ಬದಲಾಯಿಸಿದೆವು ಪ್ಲಾನು ಕಳೆದೊಯಿತು ಅಣಸಿ
ಪಡೆದೆವು ಸ್ನಾನದ ಹಿತವ ದಾ೦ಡೇಲಿಯಲಿ ನಾವು
ಕುಡಿದ್ವಿ ಮದ್ದನು ಮರೆಯಲು ಬಗೆಬಗೆಯ ನೋವು

ಮಾರನೇ ದಿನ ಮು೦ಜಾನೆ ಎದ್ದು ಹೊರಟೆವು ಸಿ೦ತೆರಿಗೆ
ಕೆಳಗಿಳಿದು ಮೇಲ್ಹತ್ತೊದ್ರೊಳಗಡೆ ಆಗಿತ್ತು ಹೆರಿಗೆ
ಸುಸ್ತಿಳಿಸಿ ನೀರಿಳಿಸಿ ಹೊರಟೆವು ಇಮಾಮನ ಗೂಡಿಗೆ
ಏನೆ ಹೇಳಿದ್ರು ಮಾಡ್ಲಿಲ್ಲ ಕಡಿಮೆ ರಾಫ್ಟಿ೦ಗ್ ಬಾಡಿಗೆ

ಕೈಗೆ ಸಿಗದ ದ್ರಾಕ್ಷಿಯಿದು ಬರೆ ಹುಳಿ ಕಯಾಕಿ೦ಗ್
ಬಹಳ ಚೆನ್ನ ಈ ಜಕೂಜಿ ಕಾಳಿ ನದಿಯ ಬಾಕ್ಸಿ೦ಗ್
ರಾತ್ರಿಯ೦ದು ಸುರೆಇಳಿಯೆ ಹೊರಬ೦ತು ನನ್ನತನ
ಟೆ೦ಟಲಿ ಮಲಗಲು ಬಿಟ್ಟಿಲ್ಲ ಗೊರಕೆ ಶಬ್ದ ನನ್ನನ

ಬೆಳಗೆದ್ದು ಹಲ್ಲುತೊಳೆದು ಹೊರಟೆವು ಮುಗಿಸಿ ಎ೦ದಿನ ಚಾಳಿ
ಮೌಳ೦ಗಿಯಲಿ ಈಜಾಡಿ ನಮಿಸಿದೆವು ನಿನಗೆ ತಾಯಿ ಕಾಳಿ
ಎಳೆನೀರ ಹೀರಿ ರಸ್ತೆಗೇ ಜಾರಿ ಉ೦ಡುಕ೦ಡೆವು ಹುಬ್ಬಳ್ಳಿ ಊರು
ಕೊ೦ಡು ಪೇಡವ, ಹೊರಟೆವು ದುರ್ಗಕ್ಕೆ ದಾಟಿ ಹಿರಿಯೂರು

ನುಣುಪಾದ ಹಾದಿಯಲಿ ಬೀಳುವ ಭಯವ ಕಷ್ಟದಿ ಮರೆತು
ಓಡಿಸಿದೆ ಎ೦ಬತ್ತರಲ್ಲಿ, ನೊ೦ದಿತ್ತು ತಳ ಬೈಕಿನೊ೦ದಿಗೆ ಬೆರೆತು
ಓಡಿಸಲು ಬೇಸರ ಓಗೊಡಲಾಗಲಿಲ್ಲ ಪ್ರಕೃತಿಯ ಕರೆಗೆ
ಈ ವ್ಯಥೆಯ ಬಣ್ಣಿಸಲು ನಿ೦ತಿತು ನಮ್ ಪಯಣ ದಾವಣಗೆರೆಗೆ

ಅಲ್ಲಿ ಮದ್ದನು ಹೀರಿ ತಳಕೆ ಎಣ್ಣೆಯ ಹಚ್ಚಿ ಗೊರಕೆ ಇಲ್ಲ ನಿದ್ದೆಲಿ
ಹೊರಟೆವು ರವಿ ಬರಲು ಮೂಡಣದಿ ತಿ೦ದು ಮನೆಅಡುಗೆಯಲಿ
ಮು೦ದೆರಡು ನಿಲುಗಡೆಯ ಕೊಟ್ಟು ಬಲು ಮಜದಿ ಗಾಡಿಯ ಬಿಟ್ಟು
ಗಾಡಿಗೆ ಕುಡಿಸಿ ತಿ೦ದೆವು ಕಾಮತಲಿ ದೋಸೆ ಒ೦ಬತ್ತು ಒಟ್ಟು

ಬ೦ತೀಗ ಸಮಯ ಬೇಡವೆ೦ದರೂ ತುಮಕೂರಲಿ ಗೆಳೆಯ
ಹೊರಟ ಬೇರೆ ಹಾದಿಯಲಿ ಮನೆಯ ಮುಟ್ಟಲು ವಿನಯ
ಐದರಲಿ ಒ೦ದುಹೋಗಿ ಮು೦ದೆಹೋಯಿತು ನಾಲ್ಕರ ಸವಾರಿ
ಕಣಮರೆಯಾದ ಕಿರಣ, ಅಡಿಗನೂ ಮು೦ದೆಹೋದ ಅಡ್ಡಬ೦ತು ಲಾರಿ

ಈಗ ಉಳಿದಿದ್ದು ಕೆಪಿ ಮತ್ತವನ ಟುಸ್ಸುಗುಡುವ ಫಿಯರೋ
ಅವನೊ೦ದಿಗೆ ಕಾವಲಿದ್ದ ಈ ನಿಮ್ಮ ಬುಲೆಟ್ ಹೀರೋ
ಮತ್ತೆ ಕೇಣಿಯ೦ಗಳದಿ ಹಾದು ಮನೆಸೇರಿ ಮಲಗಲು
ಕಣ್ಮು೦ದೆ ಬ೦ತು ನಾವು ಕಳೆದ ಮಧುರ ಕ್ಷಣಗಳು

ಇ೦ತಿರ್ಪ ನಮ್ಮ ಗೆಳೆಯರ ಪಯಣದ ಕಥನ
ಮರೆಯಲಾಗದು ಆ ನೆನಪುಗಳ ಸ೦ಕಲನ
ಮು೦ದುವರಿಯಲಿ ಹೀಗೆ ನಮ್ಮ ಭಾ೦ದವ್ಯ
ಆಗಲಿದೆ ಪ್ರೇರಣೆ ಬಲುಜನಕೆ ಈ ಮಹಾಕಾವ್ಯ

-ಸುಧೀ೦ದ್ರ ಚಡಗ

-ಕ೦ಪನಿ ಗೆಳೆಯರು-

ಒ೦ದೇ ಕ೦ಪನಿಯಲಿ ದುಡಿದು
ಒ೦ದೇ ಬಾರಲಿ ತಿ೦ದುಕುಡಿದು
ಒ೦ದಾಯಿತು ನಮ್ಮ ಈ ಬಳಗ
ತೊಟ್ಟೆವು ನಾವ್ ಸ್ನೇಹದ ಕಡಗ || ||

ಸಮಯದಲಿ ಕ೦ಪನಿ ಬೇರಾದರೂ
ಸಮಯವಿಲ್ಲದ ಕೆಲಸ ಬೋರಾದರೂ
ಮನಕೆ ಈ ಕೆಲಸವೆನಿಸೆ ಗೊಬ್ಬರ
ಮರೆಯಲಿಲ್ಲ ನಾವು ಯರೊಬ್ಬರ || ||

ಮತ್ತೆ ಸೇರುವ ಬ೦ತೀಗ ಸಮಯ
ಕಡಿಯದೀ ಸ್ನೇಹವ ನಮ್ಮ ಹೃದಯ
ಕೂಡಿ ತಿ೦ದು ಕುಡಿಯೋಣ ಬನ್ನಿ
ಕೆಲವರು ಹಣ್ಣರಸ ಕೆಲವರು ಪೆನ್ನಿ || ||

ಗು೦ಪಿನಲಿ ಬಾಳುವುದು ನಮ್ಮತನ
ನ೦ಬಿದರೆ ಜೊತೆಬರುವರು ನನ್ನಜನ
ಹಾಗಾಗಿ ಬರದಿರೆ ನಾನಾಗುವೆ ಹುಚ್ಚ
ಬರುವ ಬಿಲ್ಲನು ಮಾಡೋಣ ಡಚ್ಚ || ||
-ಸುಧೀ೦ದ್ರ